ನಿಂಬರಗಿ ಮಹಾರಾಜರು
	1787-1882. ಧರ್ಮಬೋಧಕ ಸಾಧುಗಳು. ಹುಟ್ಟಿದ್ದು ತಮ್ಮ ತಾಯಿಯ ತವರಾದ ಸೊನ್ನಲಾಪುರದಲ್ಲಿ (ಸೊಲ್ಲಾಪುರ) ವೀರಶೈವ ನೀಲಗಾರರಾದ ಇವರ ಕುಲನಾಮ ಮಿಸಲಕರ ಎಂದು. ಇವರ ಹುಟ್ಟು ಹೆಸರು ನಾರಾಯಣ ಅಥವಾ ನಾಗಪ್ಪ. ಬಳಕೆಯ ಹೆಸರು ನಾರಾಯಣರಾವ್ ಅಥವಾ ಭಾವು ಸಾಹೇಬ ಮಹಾರಾಜ. ಗುರುಲಿಂಗ ಜಂಗಮ ಮಹಾರಾಜ ಎಂಬುದೂ ರೂಢಿಯ ಹೆಸರು. ಇವರ ಮನೆತನದ ಮೂಲಪುರುಷರು ಧಾರವಾಡ ಜಿಲ್ಲೆಯ ಕುಪೇನೂರ ಗ್ರಾಮದವರು, ಗೌಡರು. ಆ ಮನೆತನದ ಸಿದ್ಧಪ್ಪನೆಂಬಾತ ಕೆಲ ಕಾರಣಗಳಿಂದಾಗಿ ಕುಪೇನೂರ ಬಿಟ್ಟು, ಕೆಲಕಾಲ ಗದಗ ಬೆಟಗೇರಿಯಲ್ಲಿದ್ದು ಅನಂತರ ಪಂಢರಪುರದ ಬಳಿಯ ಮಂಗಳವೀಡಿನಲ್ಲಿ (ಮಂಗಳಪೇಟೆ) ನೆಲಸಿದ. ಈ ಸಿದ್ಧಪ್ಪನಿಂದ ಏಳನೆಯ ತಲೆಯ ಲಕ್ಷ್ಮಣಪ್ಪ ಇವರ ಮುತ್ತಜ್ಜ. ಆತ ಮಂಗಳ ವೀಡಿನಿಂದ ನಿಂಬರಗಿಗೆ ಬಂದು ಅಲ್ಲಿಯೇ ನೆಲಸಿದ. ಡೋಂಗರಪ್ಪ, ನಾಗಪ್ಪ, ಧೋಂಡಪ್ಪ ಎಂಬುವರು ಇವರ ಮಕ್ಕಳು. ಇವರಲ್ಲಿ ನಾಗಪ್ಪನ ಮಗ ಭೀಮಣ್ಣನೇ ಇವರ ತಂದೆ.

	ಮಹಾರಾಜರ ನಿಲುವು ಎತ್ತರ, ಶರೀರ ಭವ್ಯ, ಪ್ರಕೃತಿ ಸಶಕ್ತ, ವರ್ಣ ಗೌರ, ಕಿವಿಗಳು ಅಗಲ, ಬುದ್ಧಿ ಅತೀ ತೀಕ್ಷ್ಣ.

	ಇವರ ಐದನೆಯ ವಯಸ್ಸಿಗೆ ತಾಯಿ ತೀರಿದಳು. ಚಿಕ್ಕಂದಿನಿಂದಲೂ ಆಟದ ಕಡೆಗೆ ಒಲವು ಬಹಳ. ಅದಕ್ಕಾಗಿ ಬೈದ ತಂದೆಗೆ, ನಾನಾಡುವ ಆಟವು ಅನ್ಯರಿಂದ ಭಿನ್ನವಾಗಿದೆ ಎಂದು ಇವರ ಪ್ರತ್ಯುತ್ತರ.

	ಇಪ್ಪತ್ತು ಇಪ್ಪತ್ತೈದರ ಪ್ರಾಯದಲ್ಲಿ ಒಮ್ಮೆ ಹೋಳೀಹಬ್ಬದಲ್ಲಿ ಆಟವಾಡಿ ಮನೆಗೆ ಬರಲು ತಡವಾಯಿತು. ತಂದೆ ಅತಿಯಾಗಿ ಬೈದರು. ಮನನೊಂದ ಇವರು ಯಾರಿಗೂ ಹೇಳದೆ ಪಂಡರಪುರಕ್ಕೆ ತೆರಳಿದರು. ಅಲ್ಲಿ ನಿರಂತರ ಉಪವಾಸದ ಮೂರನೆಯ ದಿನ ದಿವ್ಯಾನುಭವವಾಯಿತು; ಸಿದ್ಧಗಿರಿಗೆ ಹೋಗು ಅಲ್ಲಿ ನಿನ್ನ ಬಯಕೆ ಕೈಗೂಡುವುದು-ಎಂದು.

	ನಿಂಬರಗಿಗೆ ಮರಳಿ ಕೊಲ್ಲಾಪುರದ ಬಳಿಯಿರುವ ಸಿದ್ಧಗಿರಿಗೆ ಮಗಳ ಮುಡಿ ತೆಗೆಸಲು ಹೋದರು. ದೇವದರ್ಶನ ಪಡೆದು, ಗುಡಿಯ ಬಳಿಯ ಗವಿಯೊಂದರ ಮುಂದೆ ಹಾಯುವಾಗ, ಆ ಗವಿಯಲ್ಲಿದ್ದ ವೃದ್ಧ ಸತ್ಪುರಷರೊಬ್ಬರು ಅವರನ್ನು ಕೈಸನ್ನೆ ಮಾಡಿ ಕರೆದು-ನಾನು ಹೇಳಿದಂತೆ ಸಾಧನೆ ಮಾಡು, ನಿನ್ನ ಕೀರ್ತಿ ದಿಗಂತದಲ್ಲಿ ಹರಡುವುದು. ನೀನು ಬಂಗಾರದ ಪಲ್ಲಕ್ಕಿಯಲ್ಲಿ ಮೆರೆಯಬಹುದು- ಎಂದ ಆಶೀರ್ವದಿಸಿದರು.

	ಅನುಗ್ರಹ ಪಡೆದು ನಿಂಬರಗಿಗೆ ಮರಳಿದ ಮೇಲೆ ಸುಮಾರು ಆರು ವರ್ಷಗಳವರೆಗೂ ಯಾವ ವಿಶೇಷ ಸಾಧನೆಯಾಗಲಿಲ್ಲ. ಇವರಿಗೆ ಪರಮಾರ್ಥದ ನೆನಪುಕೊಡಲು ಆ ವೃದ್ಧ ಸತ್ಪುರಷರು ಅಲ್ಲಿಗೆ ಬಂದು ಊಟ ಮಾಡಿದರು. ತಮಗಿತ್ತ ನಾಲ್ಕಾಣೆ ದಕ್ಷಿಣೆಯನ್ನು ಮರಳಿಸಿ ಎರಡು ರೂಪಾಯಿ ಕೊಡಲು ಕೇಳಿದರು. ಆಗ ಮಹಾರಾಜರು ಬೇರೆಯವರಿಂದ ಕೈಗಡ ತಂದು ಅವರಿಗೆ ಅರ್ಪಿಸಲು ಅವರು ರೂಪಾಯಿಗಳನ್ನು ಹಿಂದಿರುಗಿಸುತ್ತ ಹೇಳಿದರು- ಇವುಗಳಲ್ಲಿ ಒಂದನ್ನು ನಿನ್ನ ಪ್ರಪಂಚಕ್ಕೆ ಇನ್ನೊಂದನ್ನು ಪರಮಾರ್ಥಕ್ಕೆ ಬಳಸು- ಎಂದು.

	ಅನಂತರ ಮಹಾರಾಜರು ತಮ್ಮ 36ರಿಂದ 67 ವಯಸ್ಸಿನವರೆಗೆ ಮನವಿಟ್ಟು ಅವಿರತ ಸಾಧನೆಗೈದು ಪರಮಾರ್ಥರ ಅತ್ಯುಚ್ಚ ಪದಕ್ಕೇರಿದರು. ಮುಂದೆ ತಮ್ಮ ನಿತ್ಯಸಾಧನೆಗೆ ಚ್ಯುತಿ ಬರದಂತೆ ಪರಮಾರ್ಥವನ್ನು ಬೋಧಿಸಿ ಜನತೆಯನ್ನು ಉದ್ಧರಿಸುವಲ್ಲಿ 28 ವರ್ಷ ಕಳೆದರು.

	ಮೊದಮೊದಲು ಇವರು ತಮ್ಮ ನೀಲಗಾರಿಕೆಯ ಉದ್ಯೋಗವನ್ನೇ ಕೈಗೊಂಡರು. ಅದು ಪರಮಾರ್ಥ ಸಾಧನೆಗೆ ಅಷ್ಟು ಅನುಕೂಲವಲ್ಲೆಂದು ಕುರಿಗಾಯುವ ಕಾಯಕಕ್ಕೆ ಅಂಟಿಕೊಂಡರು. ನಡುವೆ ಹನ್ನೆರಡು ವರ್ಷ ಜವಳಿ ವ್ಯಾಪಾರವನ್ನು ಮಾಡಿದರಂತೆ.

	ತಮ್ಮ ಜೀವನದ ವಿವಿಧಾನುಭವಗಳನ್ನೂ ದಿವ್ಯಾನುಭವಗಳನ್ನೂ ತಾವೇ ರಚಿಸಿದ ಕೆಲ ಪದಗಳಲ್ಲವರು ಹೇಳಿರುವರು. `ಜಗಭರಿತ ನೀನು, ಜಗದ ಒಳಗೆ ನಾನು. ಪ್ರಣವರೂಪ ನೀನು ಪಠಿಸಿ ನೋಡುವೆ ನಾನು ಎನುತನಂತೆ `ಗುರುಲಿಂಗ ಜಂಗಮ ನೀನೆ, ನಾನು ನೀನೇ ಇಹೆನು ಎಂಬ ನಿಲುವಿಗೇರಿದರು. ಮೊದಲು ನೀಳಾರೆ (ನೀಲಗಾರ) ಇದ್ದ ಮಹರಾಜರು ಮುಂದೆ ನೀರಾಳೆ (ಮುಕ್ತರು) ಆದರು. ದೇವರು ರಾಮ ಆಗಿ ಬಂದ, ಕೃಷ್ಣ ಆಗಿ ಬಂದ, ನಿಂಬರಗಿ ಮಹಾರಾಜ ಆಗಿ ಬಂದ ಎಂದು ಇವರ ಶ್ರೇಷ್ಠ ಶಿಷ್ಯರೂ ಗುರುದೇವ್ ರಾನಡೆಯವರ ಗುರುವೂ ಆದ ಉಮದಿಯ ಶ್ರೀ ಬಾವುಸಾಹೇಬ ಮಹರಾಜರು ನುಡಿದ ಮಾತು ಸತ್ಯಾರ್ಥಪೂರ್ಣವಾಗಿದೆ.

	ನಿಂಬನರಗಿಯವರು ತಮ್ಮ ಪರಮಾರ್ಥದ ಮಹಿಮೆಯಿಂದ ಅನೇಕ ಶಿಷ್ಯರನ್ನು ಆಕರ್ಷಿಸಿದರು. ಆಂಧ್ರದ ರಘುನಾಥ ಪ್ರಿಯರು, ದೇವನಾಗರೀಲಿಪಿಯಲ್ಲಿ ಮಹಾರಾಜರ ವಚನವೆಂಬ ಗ್ರಂಥವನ್ನು 1907ರಲ್ಲಿ ಮುದ್ರಿಸಿ ಪ್ರಕಟಿಸಿದ ಬಾಬಾಚಾರ್ಯರು, ಪ್ರಪಂಚ ಪರಮಾರ್ಥಗಳೆರಡನ್ನೂ ಸಾಧಿಸಿ ನಿತ್ಯನೇಮಾವಳಿಯನ್ನು ರಚಿಸಿದ ಉಮದಿಯ ಶ್ರೀ ಭಾವುಸಾಹೇಬ ಮಹಾರಾಜರು, ಇವರ ವಚನಗಳನ್ನು ಸಂಗ್ರಹಿಸಿ ಬೋಧಸುಧೆಯೆಂಬ ಗ್ರಂಥವನ್ನು ರಚಿಸಿದ ಆಗರಖೇಡದ ಆದ್ಯ ರಘುನಾಥಾಚಾರ್ಯರು ಇವರ ಶಿಷ್ಯರಲ್ಲಿ ಮುಖ್ಯರು.

	ಬೋದಸುಧೆ ಗಾತ್ರದಲ್ಲಿ ಕಿರಿಯದಾದರೂ ಗುಣದಲ್ಲಿ ಹಿರಿಯರು. ಅದರಲ್ಲಿ ನಡತೆಯ ಮೂಲತತ್ತ್ವಗಳು, ದುರ್ಗುಣ ತ್ಯಾಗ, ಸದ್ಗುಣ ಸಂಪಾದನೆ ಹಾಗೂ ಪರಮಾರ್ಥ ಮಾರ್ಗ ಎಂಬ ನಾಲ್ಕು ವಿಭಾಗಗಳಿವೆ. ಅಥಣಿಯ ದೇಶಪಾಂಡೆ ಮನೋಹರರಾಯರು ಇದನ್ನು ಪದ್ಯರೂಪದಲ್ಲಿ ಪ್ರಕಟಿಸಿರುವರು.

	ಪ್ರಪಂಚ ಪರಮಾರ್ಥಗಳಲ್ಲಿ ವಿರೋಧವಿಲ್ಲೆಂದೂ ಪರಮಾತ್ಮನ ಭಕ್ತಿಯೆಂದ ಅಭ್ಯುದಯ ನೀಶ್ರೇಯಸಗಳೆರಡೂ ಲಭಿಸಿ ಪ್ರಪಂಚ ಸುಖಮಯವಾಗುವುದಲ್ಲದೆ ಆತ್ಮಪ್ರಾಪ್ತಿಯೂ ಆಗುವುದೆಂದೂ ತಮ್ಮ ಜೀವಿತೋದಾಹರಣೆಯಿಂದ ಎಲ್ಲರೂ ತೋರ್ಪಡಿಸಿ ನಿಂಬರಗಿಯವರು ತಮ್ಮ 95ನೆಯ ವಯಸ್ಸಿನಲ್ಲಿ (1882ರಲ್ಲಿ ಚೈತ್ರ ಶುದ್ಧ 12 ಉಪರಾಂತಿಕ 13 ದಿನ ರಾತ್ರಿ ಸುಮಾರು 12 ಗಂಟೆಗೆ) ನಿಂಬರಗಿಯಲ್ಲಿಯೇ ನಿಧನಹೊಂದಿದರು.

	ಮಹಾರಾಜರ ಸಮಾಧಿಯನ್ನು ಮೊದಲು ಹಳ್ಳದ ಆಚೆಯ ಬದಿಯಲ್ಲಿ ಗೊರವರ ಒಡೆತನದ ಭೂಮಿಯಲ್ಲಿ ಮಾಡಲಾಗಿತ್ತು. ಕಾರಣಾಂತರಗಳಿಂದ ಅಸ್ಥಿಗಳನ್ನು ಸ್ಥಳಾಂತರಿಸುವ ಪ್ರಸಂಗ ಬರಲು 1900ರವರೆಗೆ ಅಲ್ಲೇ ಇದ್ದ ಅವರ ಅಸ್ಥಿಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿ, ಒಂದನ್ನು ನಿಂಬರಗಿಯಲ್ಲಿಯೇ ಬೇರೊಂದು ಸ್ಥಳದಲ್ಲಿ ಸ್ಥಾಪಿಸಿ ಇನ್ನೊಂದನ್ನು ಉಮದಿಯ ಭಾವುಸಾಹೇಬ ಮಹಾರಾಜರವರು ಇಂಚಗೇರಿಗೆ ಒಯ್ದು, 1903ರಲ್ಲಿ ಅಲ್ಲೊಂದು ಸಮಾಧಿಯನ್ನು ರಚಿಸಿದರು. ನಿಂಬರಗಿಯಲ್ಲಿಯ ಸಮಾಧಿಯ ಮೇಲೆ 1926-27ರಲ್ಲಿ ಚಿಕ್ಕಗುಡಿಯೂ 1929ರ ಚೈತ್ರದಲ್ಲಿ ಲಿಂಗವೂ ಸ್ಥಾಪಿತವಾಗಿದೆ. ಸಮಾಧಿಯ ಮುಂಬದಿಯ ಮಧ್ಯದಲ್ಲಿ ದೇವನಾಗರೀ ಲಿಪಿಯಲ್ಲಿ ಶ್ರೀ ಸದ್ಗುರು ಗುರುಲಿಂಗ ಜಂಗಮ ಮಹಾರಾಜ ಎಂದು ಕೆತ್ತಲಾಗಿದೆ. ಪ್ರತಿವರ್ಷ ಮಹಾರಾಜರ ಪುಣ್ಯತಿಥಿಯ ವೇಳೆ ಚೈತ್ರಶುದ್ಧ ನವಮಿಯಿಂದ ತ್ರಯೋದಶಿಯವರೆಗೆ ಸಪ್ತಾಹವೂ ಜರುಗುತ್ತದೆ.
(ಇ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ